ಶ್ರೀ ಸತ್ಯ ಸಾಯಿ ಪಬ್ಲಿಕೇಷನ್ಸ್‌ ಸೊಸೈಟಿ (ರೆ), ಕರ್ನಾಟಕ

ಸಂಸ್ಥೆಯ ಬಗ್ಗೆ

ಶ್ರೀ ಸತ್ಯಸಾಯಿ ಸಾಹಿತ್ಯವು ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರ ಸಂದೇಶವನ್ನು ವಿಶ್ವದ ಎಲ್ಲ ಜನರಿಗೆ ತಲುಪಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿದೆ. ಸಾಯಿ ಸಾಹಿತ್ಯವು ಸದ್ಯ ಪ್ರಪಂಚದ ಬಹುಪಾಲು ಭಾಷೆಗಳಲ್ಲಿ ಲಭ್ಯ.

ಶ್ರೀ ಸತ್ಯ ಸಾಯಿ ಪಬ್ಲಿಕೇಷನ್ಸ್‌ ಸೊಸೈಟಿ ಜನವರಿ ೨೨,, ೧೯೯೩ರಂದು ಸ್ವಾಮಿಯ ಕೃಪಾಶೀರ್ವಾದಗಳೊಂದಿಗೆ ಪ್ರಾರಂಭವಾಯಿತು. ಶ್ರೀ. ಯಾದಾಳಂ ಗಂಗಾಧರ ಶೆಟ್ಟಿ, ಶ್ರೀ. ನಾಗೇಶ್‌ ಜೀ. ಧಾಕಪ್ಪ ಮತ್ತು ಡಾ. ಜೀ. ಪದ್ಮನಾಭನ್‌ ಅವರನ್ನು ಸ್ವಾಮಿ ಕ್ರಮವಾಗಿ ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ನೇಮಿಸಿದರು.

೧೯೬೦ರ ದಶಕದ ಉತ್ತರಾರ್ಧದಲ್ಲಿ ಸಾಯಿ ಸಾಹಿತ್ಯವನ್ನು ಕನ್ನಡದಲ್ಲಿ ಹೊರತರುವ ಪ್ರಯತ್ನ ನಮ್ರವಾಗಿ ಪ್ರಾರಂಭವಾಯಿತು. ಬೆಂಗಳೂರಿನ ಕಾಡುಗುಡಿಯಲ್ಲಿ ಬೃಂದಾವನ ಪ್ರಾರಂಭವಾದಾಗಿನಿಂದ Sri Sathya Sai Education and Publication Foundation ಸ್ವಾಮಿಯ ಸಂದೇಶಗಳ ಪ್ರಸಾರ ಕಾರ್ಯದಲ್ಲಿ ತೊಡಗಿತು. ನಂತರ ಈ ಕೆಲಸವನ್ನು ಕರ್ನಾಟಕದ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಪ್ರಕಟಣಾ ವಿಭಾಗವು ವಹಿಸಿಕೊಂಡಿತು.

ಪ್ರೊ. ನಾ. ಕಸ್ತೂರಿ, ಡಾ. ವಿ. ಕೃ. ಗೋಕಾಕ್‌, ಶ್ರೀ. ಜೀ. ಪೀ. ರಾಜರತ್ನಂ, ಶ್ರೀ. ಹೆಚ್‌. ಎಂ. ಶಿವರಾಂ, ಶ್ರೀ. ಮಡಿಯಾಲ ನಾರಾಯಣ ಭಟ್‌, ಶ್ರೀ. ವೀ. ಎನ್‌. ಆಚಾರ್ಯ, ಶ್ರೀ. ಯೂ. ಗಂಗಾಧರ ಭಟ್‌, ಪ್ರೊ. ಆರ್‌. ಜೀ. ಕುಲಕರ್ಣಿ ಈ ಕಾರ್ಯದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದರು. 'ಸತ್ಯಂ ಶಿವಂ ಸುಂದರಂ' ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆದ ಪ್ರೊ. ಕಸ್ತೂರಿಯವರು ಅದನ್ನು ಕನ್ನಡದಲ್ಲೂ ಬರೆದರು. ಶ್ರೀ. ಮಡಿಯಾಲ ನಾರಯಣ ಭಟ್ ಅಳಿಕೆಯಿಂದ ಪ್ರಕಟಿಸಿದ 'ಸೇವಾಮೃತ' ಪತ್ರಿಕೆಯಲ್ಲಿ ಭಗವಾನ್‌ ಬಾಬಾರ ಬಗ್ಗೆ ಲೇಖನಗಳು ಇರುತ್ತಿದ್ದುವು. ಅವರು ಕನ್ನಡದಲ್ಲಿ ಕೆಲವು ಪುಸ್ತಕಗಳನ್ನು ಸಹ ಪ್ರಕಟಿಸಿದರು. ನಂತರ ಈ ಕಾರ್ಯವನ್ನು ಶ್ರೀ. ಗಂಗಾಧರ ಭಟ್ ಮತ್ತವರ ಅಳಿಕೆ ಮತ್ತು ಮುದ್ದೇನಹಳ್ಳಿಯ ಸಹೋದ್ಯೋಗಿಗಳು ಮುಂದುವರಿಸಿದರು. ಶ್ರೀ. ಆಚಾರ್ಯ ಸಿರಸಿಯಿಂದ 'ಸತ್ಯ ಸಾಯಿ ಸುಧಾ' ಎಂಬ ಪತ್ರಿಕೆಯನ್ನು ಕೆಲವು ವರ್ಷಗಳು ಹೊರತಂದರು.

'ಸೇವಾಮೃತ' ಕನ್ನಡದ ಮೊದಲ ಸಾಯಿ ಸಾಹಿತ್ಯದ ಪ್ರಕಾಶನ. ಶ್ರೀ. ಮಡಿಯಾಲ ನಾರಾಯಣ ಭಟ್ಟರು ಈ ಪತ್ರಿಕೆಯನ್ನು ಜುಲೈ ೧೯೬೦ರಿಂದ ಅಕ್ಟೋಬರ್‌ ೧೯೮೭ರವರೆಗೆ ಅಳಿಕೆಯಿಂದ ಪ್ರಕಟಿಸಿದರು. ಅದೇ ಸಮಯದಲ್ಲಿ ನವೆಂಬರ್‌ ೧೯೬೩ರಿಂದ ಶಿವಮೊಗ್ಗೆಯ ಶ್ರೀ ಸತ್ಯಸಾಯಿ ಮಂಡಳಿಯ ಸಹಾಯದಿಂದ ಶ್ರೀ. ಶಿವರಾಂ 'ಪ್ರಶಾಂತಿ' ಹೊರತರುತ್ತಿದ್ದರು. ಸ್ವಾಮಿಯ ನಿರ್ದೇಶನ ಮೇರೆಗೆ ಈ ಪತ್ರಿಕೆಯನ್ನೇ 'ಸನಾತನ ಸಾರಥಿ' ಎಂದು ನವೆಂಬರ್‌ ೧೯೭೨ರಿಂದ ಅಕ್ಟೋಬರ್‌ ೧೯೮೮ರವರೆಗೆ ಪ್ರಕಟಿಸಿದರು. ಅಳಿಕೆಯ ಶ್ರೀ. ಗಂಗಾಧರ ಭಟ್ಟರ ಸಂಸ್ಥೆಯ ಕೋರಿಕೆಯಂತೆ ಕನ್ನಡದ 'ಸನಾತನ ಸಾರಥಿ' ಪ್ರಕಟಣೆಯು ಅಳಿಕೆಯಿಂದ ಮುಂದುವರಿಯಿತು. ಆಗಸ್ಟ್‌ ೨೦೧೫ರಿಂದ 'ಸನಾತನ ಸಾರಥಿ' ಪತ್ರಿಕೆಯ ಪ್ರಕಟನೆಯನ್ನು ಸೊಸೈಟಿಯು ವಹಿಸಿಕೊಂಡಿತು.

೨೦೦೦ರ ನಂತರ ಸೊಸೈಟಿ ಒಂದು ಪ್ರಕಟಣಾ ಸಲಹಾ ಸಮಿತಿಯನ್ನು ಮತ್ತು ಸಂಪಾದಕ ಮಂಡಳಿಯನ್ನು ಹೊಂದಿದೆ. ಸಲಹಾ ಸಮಿತಿಯು ಯಾವುದೇ ಪ್ರಕಟಣೆಯ ಸೂಕ್ತತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತದೆ.

ಸೊಸೈಟಿಯು ಈವರೆಗೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ಹತ್ತಕ್ಕೂ ಅಧಿಕ ಧ್ವನಿಮುದ್ರಿಕೆಗಳನ್ನು ಹೊರತಂದಿದೆ.

ನಿಮ್ಮ ಅಭಿಪ್ರಾಯ